Thursday 26 December 2013

An article written by me in 2007 for a souvenir

ಸಂಗೀತ ಮತ್ತು ಭಾರತೀಯ ಆಧ್ಯಾತ್ಮಿಕ ಪರಂಪರೆ 


ಜಗತ್ತಿನಲ್ಲಿ ಭಾರತದೇಶವೇ ಸಂಸ್ಕೃತಿಯ ಉಗಮಕ್ಕೆ ಮೂಲಸ್ಥಾನ. ವಿಶ್ವದಲ್ಲಿ ಮೊಟ್ಟಮೊದಲು ಸಂಸ್ಕೃತಿಯನ್ನು ವಿಸ್ತಾರಗೊಳಿಸಿದ ಶ್ರೇಯಸ್ಸು ಭಾರತಕ್ಕೇ ಸೇರಿದೆ ಎಂಬುದನ್ನು ಇತಿಹಾಸವು ಸಂಪೂರ್ಣವಾಗಿ ಧೃಢಪಡಿಸುತ್ತದೆ. ಇತರ ದೇಶಗಳಲ್ಲಿ ಅಜ್ಞಾನವು ತಾಂಡವವಾಡುತ್ತ, ಅಲ್ಲಿಯ ಜನರು ಅನಾಗರಿಕ ಜೀವನವನ್ನು ನೆಡೆಸುತ್ತಿದ್ದ ಕಾಲದಲ್ಲೇ ಭಾರತವು ಜ್ಞಾನದ ಬೆಳಕನ್ನು ಕಂಡಿತ್ತು. ತನ್ನ ಉತ್ತಮ ಸಂಸ್ಕೃತಿ ಹಾಗು ಸಂಸ್ಕಾರಗಳಿಂದ ಅನಂತರದ ಕಾಲಗಳಲ್ಲಿ ವಿಶ್ವಕ್ಕೇ ಮಾದರಿಯಾಯಿತು. ಭಾರತದಲ್ಲಿ ಅತ್ಯಂತ ಪ್ರಾಚೀನ ಕಾಲದಲ್ಲೇ ಜನ್ಮ ತಾಳಿದ ಅನೇಕ ವಿದ್ಯೆಗಳಲ್ಲಿ ಆಧ್ಯಾತ್ಮ ವಿದ್ಯೆಯೇ ಶ್ರೇಷ್ಠವಾದುದು. ಈ ಆಧ್ಯಾತ್ಮ ವಿದ್ಯೆಯು ಮನುಷ್ಯನಿಗೆ ಇಹದಲ್ಲಿ ಶಾಂತಿಯನ್ನು, ಪರದಲ್ಲಿ ಮುಕ್ತಿಯನ್ನು ಕೊಡುವ ವಿದ್ಯೆಯಾಗಿದೆ. ಆನಂದವೇ ಜೀವನದ ಮುಖ್ಯವಾದ ಗುರಿ. ಈ ಆನಂದವು ಆಧ್ಯಾತ್ಮ ವಿದ್ಯೆಯಿಂದಲೇ ಲಭ್ಯವಾಗುವಂಥದ್ದು. ಈ ಅಲೌಕಿಕ ಆನಂದವನ್ನು ತಾವೂ ಅನುಭವಿಸಿ ಸಮಸ್ತ ಮಾನವ ಜನಾಂಗಕ್ಕೂ ಹಂಚಲು ಅನೇಕ ಆಧ್ಯಾತ್ಮ ಸಾಧಕರು, ಯೋಗಿಗಳು, ಋಷಿಮುನಿಗಳು, ಮತಾಚಾರ್ಯರು, ತತ್ತ್ವಜ್ಞಾನಿಗಳು ಬೇರೆ ಬೇರೆ ಕಾಲಗಳಲ್ಲಿ ಬೇರೆ ಬೇರೆ ಮಾರ್ಗಗಳಿಂದ ಆ ಪಾರಮಾರ್ಥಿಕವಾದ ಸತ್ಯವನ್ನು ಕಂಡುಕೊಂಡರು, ಇತರರಿಗೂ ಬೋಧಿಸಿದರು, ಉಪದೇಶಿಸಿದರು. ಚಿಂತನಶೀಲರಾದ ಈ ತತ್ತ್ವಶಾಸ್ತ್ರಜ್ಞರು ಭಾರತದ ಸಂಸ್ಕೃತಿ ಹಾಗು ಧರ್ಮಗಳಿಗೆ ವೈಚಾರಿಕ ಹಾಗು ವೈಜ್ಞಾನಿಕ ತಳಹದಿ ಕಲ್ಪಿಸಿದರು.

ಈ ಎಲ್ಲ ಮಹಾನುಭಾವರ ಆಧ್ಯಾತ್ಮ ಸಾಧನೆಯ ಮುಖ್ಯ ಗುರಿಯೇ ಭಗವಂತನ ಸಾಕ್ಷಾತ್ಕಾರ. ಅಂತೆಯೆ, ಎಲ್ಲ ಆಧ್ಯಾತ್ಮ ಸಾಧಕರ ಸಾಮಾನ್ಯವಾದ ಗುಣ  - ತತ್ತ್ವಶಾಸ್ತ್ರೀಯವಾದ ಪ್ರಖರ ವಿಚಾರವಂತಿಕೆಯ ಜೊತೆಗೆ ಭಾವನಿರ್ಭರತೆ. ಅವರೆಲ್ಲರ ತತ್ತ್ವ ಭಕ್ತಿಯ ಹೆಗ್ಗಳಿಕೆಯನ್ನು ಹೇಳುತ್ತ, ಬುದ್ಧಿಯ ಸಂಪತ್ತು ಹಾಗು ಹೃದಯದ ಸಂಪತ್ತು ಬೇರೆಬೇರೆಯಲ್ಲ ಎಂದು ಸಾರುತ್ತದೆ. ಭಕ್ತಿಯ ಅಭಿವ್ಯಕ್ತಿಗೆ, ಹೃದಯದ ಭಾಷೆಯ ಪ್ರಕಟಣೆಗೆ ಸಂಗೀತಕ್ಕಿಂತ  ಉತ್ತಮವಾದ ಸಾಧನ ಮತ್ತೊಂದಿಲ್ಲ. ಸಂಗೀತವು ಒಂದು ದೈವಿಕವಾದ ಕಲೆ; ವಿಶೇಷವಾಗಿ ಭಾರತೀಯ ಸಂಗೀತವು ಆಧ್ಯಾತ್ಮಿಕತೆ ಹಾಗು ಭಕ್ತಿಪ್ರಾಧಾನ್ಯತೆಯ ಪ್ರತೀಕ. ಸಂಗೀತ ಹಾಗು ಆಧ್ಯಾತ್ಮಿಕತೆ ನಮ್ಮ ದೇಶದಲ್ಲಿ ಜೊತೆಜೊತೆಯಾಗಿ ಇದ್ದಂಥವು. ಸಂಗೀತಗಾರರೆಲ್ಲರು ಮಹಾನ್ ಭಗವದ್ಭಕ್ತರು, ಆಧ್ಯಾತ್ಮ ಚಿಂತಕರು ಆಗಿದ್ದವರು. ಅಂತೆಯೆ, ತತ್ತ್ವಜ್ಞಾನಿಗಳು, ಯೋಗಿಗಳು ಸಂಗೀತದ ಶ್ರೇಷ್ಠ ಗುಣಕ್ಕೆ ಮಾರುಹೋದವರು.

"ವೇದಾನಾಂ ಸಾಮವೇದೋsಸ್ಮಿ " ಎಂದು ಶ್ರೀ ಕೃಷ್ಣ ಪರಮಾತ್ಮನು ಭಗವದ್ಗೀತೆಯಲ್ಲಿ ಹೇಳಿರುತ್ತಾನೆ. ಶ್ರೀವಿಷ್ಣುಸಹಸ್ರನಾಮದಲ್ಲಿ ಭಗವಂತನನ್ನು 'ಸಾಮಗಾಯನಃ' (ಅಂದರೆ ಸಾಮಗಳಿಂದ ಹಾಡಲ್ಪಡುವವನು) ಎಂದು ಕರೆಯಲಾಗಿದೆ. ಸಾಮಗಾನಲೋಲನಾದ ಆ ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಂಡ ಎಲ್ಲ ಮಹಾನುಭಾವರು ತಮ್ಮ ತಮ್ಮ ತತ್ತ್ವಗಳನ್ನು ಪ್ರತಿಪಾದಿಸಲು, ತಮ್ಮ ಭಕ್ತಿಯನ್ನು ವ್ಯಕ್ತಪಡಿಸಲು, ಭಗವದನುಭವದಲ್ಲಿ ಮೈಮರೆಯಲು, ತಾವು ಕಂಡ ಪರಮಾತ್ಮನನ್ನು ವರ್ಣಿಸಲು ಸಂಗೀತವನ್ನೂ ಸಾಹಿತ್ಯವನ್ನೂ ಬಳಸಿಕೊಂಡರು. ಹಾಗಾಗಿ, ನಮ್ಮ ದೇಶದ ಯಾವುದೇ ಆಧ್ಯಾತ್ಮಿಕ ಪರಂಪರೆಯನ್ನು ತೆಗೆದುಕೊಂಡರೂ, ಆ ಪರಂಪರೆಯಲ್ಲಿ ಬಂದಂತಹ ಮಹಾನುಭಾವರ ಭಕ್ತಿಭರಿತ ಗಾನಯೋಗ್ಯ ರಚನೆಗಳು ಸಿಗುತ್ತವೆ.

ನಮ್ಮ ದೇಶದಲ್ಲಿ ಜೈನ ಹಾಗು ಬೌದ್ಧ ಧರ್ಮಗಳು ಪ್ರಚಾರದಲ್ಲಿದ್ದು, ವೈದಿಕ ಪರಂಪರೆಯು ನಾಶವಾಗುತ್ತಿದ್ದ ಕಾಲ ಸುಮಾರು ಕ್ರಿ.ಶ. ೬-೭ನೆಯ ಶತಮಾನ. ಆ ಸಂದರ್ಭದಲ್ಲಿ ಜನ್ಮ ತಾಳಿದ ಶ್ರೀಮದ್ ಆದಿಶಂಕರಾಚಾರ್ಯರು ಸಮಸ್ತ ವೈದಿಕ ವಾಂಗ್ಮಯವನ್ನು ಪುನರುತ್ಥಾನಗೊಳಿಸಿ ತಮ್ಮ ಅದ್ವೈತ ತತ್ತ್ವವನ್ನು ವಿಶ್ವಕ್ಕೆ ನೀಡಿದರು. "ಬ್ರಹ್ಮ ಸತ್ಯಂ ಜಗನ್ಮಿಥ್ಯಂ ಜೀವೋ ಬ್ರಹ್ಮೈವ ನಾಪರಃ" ಎಂದು ಸಾರಿದ ಮಹಾಮಹಿಮರು ಆದಿಶಂಕರರು. ತಮ್ಮ ತತ್ತ್ವ ಪ್ರತಿಪಾದನೆಗಾಗಿ ಪ್ರಸ್ಥಾನತ್ರಯಗಳಿಗೆ (ಭಗವದ್ಗೀತೆ, ಉಪನಿಷತ್ತುಗಳು ಮತ್ತು ಬ್ರಹ್ಮಸೂತ್ರಗಳು) ಭಾಷ್ಯಗಳನ್ನೂ, ಹಲವು ಪ್ರಕರಣಗ್ರಂಥಗಳನ್ನೂ ರಚಿಸಿದರು. ಇದಲ್ಲದೆ, ಅನೇಕ ಸ್ತ್ರೋತ್ರಗಳನ್ನು ರಚಿಸಿ ಭಗವಂತನಿಗರ್ಪಿಸಿದರು. "ಈ ದುಃಖಮಾಯವಾದ ಸಂಸಾರವನ್ನು ತ್ಯಜಿಸಿ ಭಗವಂತನ ಚಿಂತನೆಯನ್ನು ಮಾಡು ಎಂದು ಸಾರುವ ಒಂದು ಸುಂದರ ಗೀತೆ 'ಭಜಗೋವಿಂದಮ್'. ಅಂತೆಯೆ, 'ಶಿವಾನಂದಲಹರೀ', 'ಸೌಂದರ್ಯಲಹರೀ', 'ಕನಕಧಾರಾಸ್ತೋತ್ರಮ್', 'ಮನೀಷಪಂಚರತ್ನಮ್', ಮುಂತಾದ ಪದ್ಯರೂಪವಾದ ಗೇಯ ಸ್ತೋತ್ರಗಳನ್ನು ರಚಿಸಿದರು. ಇವರ ಶಿಷ್ಯರಾದ ತೋಟಕಾಚಾರ್ಯರು 'ತೋಟಕಾಷ್ಟಕಮ್' ಎಂಬ ಸಂಸ್ಕೃತ ಪದ್ಯವನ್ನು (ತಮ್ಮ ಗುರು ಶಂಕರರನ್ನು ಕುರಿತು) ರಚಿಸಿದರು. 

ಸುಮಾರು ೭-೯ನೆಯ ಶತಮಾನದಲ್ಲಿ ತಮಿಳುನಾಡಿನಲ್ಲಿ 'ತೇವಾರಮ್'ಗಳು ರಚನೆಗೊಂಡವು. ತಿರುಜ್ಞಾನಸಂಬಂಧರ್, ತಿರುನವುಕ್ಕರಸರ್ ಮತ್ತು ಸುಂದರಮೂರ್ತಿ ಎಂಬ ಮೂರು ಶೈವ ನಾಯನ್ಮಾರ ಸಂತರುಗಳಿಂದ ತಮಿಳು ಭಾಷೆಯಲ್ಲಿ ರಚನೆಗೊಂಡ ಸಾವಿರಾರು ಪದ್ಯಗಳೇ ಈ ತೇವಾರಂಗಳು. ಪ್ರತಿಯೊಂದು ಪದ್ಯವನ್ನೂ ಒಂದು ನಿರ್ದಿಷ್ಟವಾದ ರಾಗದಲ್ಲಿ ರಚಿಸಲಾಗಿದ್ದು, ಅವುಗಳನ್ನು 'ಪನ್'ಗಳೆಂದು ಕರೆಯಲಾಗುತ್ತಿತ್ತು. ಅತ್ಯಂತ ಪವಿತ್ರವಾದ ಈ ತೇವಾರಂಗಳನ್ನು ಇಂದಿಗೂ ಕೆಲವು ದೇವಸ್ತಾನಗಳಲ್ಲಿ ಹಾಡಲಾಗುತ್ತದೆ. ನಂತರ, ಸುಮಾರು ೧೫ನೆಯ ಶತಮಾನದಲ್ಲಿ ಜನ್ಮತಾಳಿದ ಅರುಣಗಿರಿನಾಥರ್ ರವರು ಮುರುಗನ ಕುರಿತು ರಚಿಸಿದ ತಮಿಳು ಪದ್ಯಗಳಾದ 'ತಿರುಪ್ಪುಗಳ್' (ಸುಮಾರು ೧೪೦೦ ಈಗ ಉಪಲಬ್ಧವಿದೆ) ಅದ್ವೈತ ತತ್ತ್ವವನ್ನೇ ಆಧರಿಸಿವೆ. ಇವು ವಿವಿಧ ರೀತಿಯ ಜಟಿಲವಾದ ಸುಂದರ ಲಯ ವಿನ್ಯಾಸಗಳನ್ನು ಹೊಂದಿ ಇಂದಿಗೂ ಅದ್ವಿತೀಯವಾಗಿವೆ. ಅದ್ವೈತ ಪರಂಪರೆಯಲ್ಲಿಯೇ ಬಂದಂತಹ ಅಪ್ಪಯ್ಯ ದೀಕ್ಷಿತರು, ಮಧುಸೂದನ ಸರಸ್ವತಿ ಮುಂತಾದವರು ತತ್ತ್ವಪ್ರಚಾರ ಕಾರ್ಯಗಳೊಂದಿಗೆ ಅನೇಕ ಸ್ತುತಿಗಳನ್ನು, ಪದ್ಯಗಳನ್ನು ರಚಿಸಿದರು. ೧೮ನೆಯ ಶತಮಾನದಲ್ಲಿ ತಮಿಳುನಾಡಿನ ಕುಂಬಕೋಣಂನಲ್ಲಿ ವಾಸವಾಗಿದ್ದ ಸದಾಶಿವ ಬ್ರಹ್ಮೇಂದ್ರರು ಒಬ್ಬ ಮಹಾನ್ ಕರ್ನಾಟಕ ಸಂಗೀತ ವಾಗ್ಗೇಯಕಾರರು ಹಾಗು ಅದ್ವೈತ ತತ್ತ್ವಜ್ಞಾನಿಗಳು. 'ಅದ್ವೈತರಸಮಂಜರಿ', 'ಬ್ರಹ್ಮತತ್ತ್ವಪ್ರಕಾಶಿಕಾ' ಮುಂತಾದ ಗ್ರಂಥಗಳನ್ನಲ್ಲದೆ, 'ಮಾನಸ ಸಂಚಾರ ರೇ', 'ಪಿಬರೇ ರಾಮರಸಂ', 'ಭಜರೇ ಯದುನಾಥಂ', ಮುಂತಾದ ಭಕ್ತಿರಸಭರಿತವಾದ ಕೀರ್ತನೆಗಳನ್ನು ರಚಿಸಿದರು. ತಮಿಳು ಕವಿಗಳಾದ ಗೋಪಾಲಕೃಷ್ಣ ಭಾರತಿಯವರು 'ನಂದನಾರ್ ಚರಿತ್ರಮ್', 'ಕಥಾಕಾಲಕ್ಷೇಪಮ್'ಗಳನ್ನಲ್ಲದೆ ಅದ್ವೈತ ಸಿದ್ಧಾಂತವನ್ನು ಆಧರಿಸಿ ಸಭಾಪತಿಕ್ಕಿ, ವರುವಾರೋ, ವರುಗಲಾಮೋ ಮೊದಲಾದ ಹಲವಾರು ಕೃತಿಗಳನ್ನು ರಚಿಸಿದರು. ಇನ್ನು ನಮ್ಮ ಕರ್ನಾಟಕ ಸಂಗೀತ ತ್ರಿಮೂರ್ತಿಗಳಾದ ತ್ಯಾಗರಾಜರು, ಮುತ್ತುಸ್ವಾಮಿದೀಕ್ಷಿತರು ಹಾಗು ಶ್ಯಾಮಾಶಾಸ್ತ್ರಿಗಳ ರಚನೆಗಳ ಮುಖ್ಯ ಉದ್ದೇಶವು ತತ್ತ್ವಪ್ರತಿಪಾದನೆ ಅಲ್ಲದಿದ್ದರೂ, ಅವು ಅದ್ವೈತ ಸಿದ್ಧಾಂತವನ್ನೇ ಅವಲಂಬಿಸಿವೆ. ಈ ಮೂವರು ವಾಗ್ಗೇಯಕಾರರು ತಮ್ಮ ಅಪಾರ ಜ್ಞಾನ, ಆಳವಾದ ಆಧ್ಯಾತ್ಮಿಕತೆ, ಘನವಾದ ಸಾಂಪ್ರದಾಯಿಕ ಸಂಗೀತಶಾಸ್ತ್ರ ಪಾಂಡಿತ್ಯ ಹಾಗು ಅದ್ಭುತವಾದ ಸೃಜನಶೀಲತೆಗಳಿಂದ ಸಾವಿರಾರು ಕೃತಿಗಳನ್ನು ರಚಿಸಿ ಕರ್ನಾಟಕ ಸಂಗೀತವನ್ನು ಬಹಳಷ್ಟು ಶ್ರೀಮಂತಗೊಳಿಸಿದರು.

ವಿಶಿಷ್ಟಾದ್ವೈತವನ್ನು ಶ್ರೀ ರಾಮಾನುಜಾಚಾರ್ಯರೇ ಸೃಷ್ಟಿಸಿದ್ದಲ್ಲ. ಅವರಿಗಿಂತ ಹಿಂದೆಯೆ ಅನೇಕ ಆಳ್ವಾರರು ಹಾಗು ಆಚಾರ್ಯರು ಇದ್ದರು. ಈ ಸಿದ್ಧಾಂತದಲ್ಲಿ ಭೇದ, ಅಭೇದ ಹಾಗು ಭೇದಾಭೇದ ಎಂಬ ತ್ರಿವಿಧ ತತ್ತ್ವಗಳನ್ನು ಪ್ರತಿಪಾದಿಸಲಾಗಿದೆ. ಜೀವರ ಮೋಕ್ಷಸಾಧನವು ಕೇವಲ ಭಕ್ತಿ ಹಾಗು ಪ್ರಪತ್ತಿ ಎನ್ನಲಾಗಿದೆ. ಸುಮಾರು ೭ರಿಂದ ೧೦ನೆಯ ಶತಮಾನದ ಕಾಲಾವಧಿಯಲ್ಲಿ ಇದ್ದ ೧೨ ಮಂದಿ ಆಳ್ವಾರರು ತಮಿಳು ಭಾಷೆಯಲ್ಲಿ ಅನೇಕ ಪದ್ಯಗಳನ್ನು ರಚಿಸಿದರು. ಅವುಗಳನ್ನು 'ನಾಲಾಯಿರ ದಿವ್ಯ ಪ್ರಬಂಧಮ್' (ನಾಲ್ಕು ಸಾವಿರ ಪ್ರಬಂಧಗಳು) ಎಂದು ಕರೆಯುವ ವಾಡಿಕೆಯಿದೆ. ತಮಿಳು ಸಾಹಿತ್ಯಕ್ಕೆ ಒಂದು ವಿಶಿಷ್ಟ ಕೊಡುಗೆಯಾಗಿ ತಮ್ಮ ಅನುಭವಗಳನ್ನು ೨೪ ದಿವ್ಯ ಪ್ರಬಂಧಗಳಲ್ಲಿ ೪೦೦೦ ಪಾಶುರ(ಪದ್ಯ)ಗಳಲ್ಲಿ ನೀಡಿದ ಆಳ್ವಾರರು ಅನುಭವಿಗಳು. ಇವುಗಳಲ್ಲಿ ಅವರು ಭಗವಂತನ ವಿವಿಧ ಅವತಾರಗಳನ್ನು ತಮ್ಮ ಅನುಭವಕ್ಕೆ ತಕ್ಕಂತೆ ವರ್ಣಿಸುತ್ತಾರೆ. ಭಗವಂತನ ಅದ್ಭುತ ಲೀಲೆಗಳನ್ನೇ ನೆನೆಯುತ್ತ ಅದರಲ್ಲೆ ತನ್ಮಯರಾಗಿಬಿಡುತ್ತಾರೆ. ಈ ದಿವ್ಯಪ್ರಬಂಧಗಳು ಆಳ್ವಾರರ ಭಗವದ್ಪ್ರೇಮದ ಪರಿವಾಹಗಳೇ ಆದರೂ, ತತ್ತ್ವ-ಹಿತ-ಪುರುಷಾರ್ಥ ಸ್ವರೂಪವನ್ನು ಅತ್ಯಂತ ಖಚಿತವಾಗಿ ತೊರಿಸಿಕೊಡುತ್ತವೆ. ಇವು ವೇದಗಳ ಸಾರವಾಗಿರುವ ಕಾರಣ ಇವುಗಳನ್ನು 'ದ್ರಾವಿಡವೇದ' ಎಂದು ಕರೆಯಲಾಗುತ್ತದೆ.  ಈ ದಿವ್ಯ ಪ್ರಬಂಧಗಳಲ್ಲಿ ಕುಲಶೇಖರ ಆಳ್ವಾರರ 'ಪೆರುಮಾಳ್ ತಿರುಮೊಳಿ', ಗೋದಾದೇವಿ(ಆಂಡಾಳ್)ಯ 'ತಿರುಪ್ಪಾವೈ', ನಮ್ಮಳ್ವಾರರ 'ತಿರುವಾಯ್ ಮೊಳಿ' ಮುಂತಾದವು ಪ್ರಸಿದ್ಧವಾಗಿವೆ. ಈ ತಮಿಳು ಆಳ್ವಾರರ ವಿಚಾರಗಳಿಂದ ಪ್ರಭಾವಿತರಾದ ಶ್ರೀರಾಮಾನುಜಾಚಾರ್ಯರು ವಿಶಿಷ್ಟಾದ್ವೈತಕ್ಕೆ ಒಂದು ಬಗೆಯ ಹೊಸದಾದ ಚೌಕಟ್ಟನ್ನು ಸೃಷ್ಟಿಸಿ, ಅದರ ಸಿದ್ಧಾಂತಗಳನ್ನು ಹಿಂದಿನ ಆಚಾರ್ಯರಿಗಿಂತ ಹೆಚ್ಚು ಜನಪ್ರಿಯಗೊಳಿಸಿದರು. ಶ್ರೀರಂಗ, ಮೇಲುಕೋಟೆ, ತಿರುಪತಿ ಮೊದಲಾದ ಪ್ರದೇಶಗಳಲ್ಲಿ ವಾಸಿಸಿ ಅನುಯಾಯಿಗಳನ್ನು ಬೆಳೆಸಿದರು. 'ಶ್ರೀಭಾಷ್ಯ', 'ವೇದಾಂತ ಸಾರ', 'ವೇದಾಂತ ಸಂಗ್ರಹ', ಮುಂತಾದವು ಇವರ ಕೃತಿಗಳು. ಆಳ್ವಾರರ ತಮಿಳು ಪ್ರಬಂಧಗಳನ್ನು ದೇವಸ್ಥಾನಗಳಲ್ಲಿ ಹಾಗು ವಿಶೇಷ ಸಂದರ್ಭಗಳಲ್ಲಿ ಹಾಡುವುದನ್ನು ಆಚರಣೆಗೆ ತಂದರು. ಅಲ್ಲದೆ, ಈಗಿನ ಕರ್ನಾಟಕ ಸಂಗೀತ ವೇದಿಕೆಯಲ್ಲಿಯೂ ಇವುಗಳನ್ನು ಹಾಡಲಾಗುತ್ತದೆ. ಇದೇ ಪರಂಪರೆಯಲ್ಲಿ ಬಂದ ತಿರುಪತಿಯ ತಾಳ್ಳಪಾಕ ಅನ್ನಮಾಚಾರ್ಯರು (೧೫ನೆ ಶತಮಾನ) ಸಂಕೀರ್ತನೆಗಳನ್ನು ರಚಿಸಿದವರಲ್ಲಿ ಮೊದಲಿಗರು. ತಮ್ಮ ಪ್ರತಿಯೊಂದು ರಚನೆಯನ್ನು ಶ್ರೀವೇಂಕಟೇಶ್ವರನಿಗೆ ಮಾಡುವ ಪುಷ್ಪ ಸಮರ್ಪಣೆಯಂದು ತಿಳಿದು, ಅವನನ್ನು ವರ್ಣಿಸಿ, ಭಜಿಸಿ, ಸ್ತುತಿಸಿ, ಪ್ರೀತಿಸಿ, ಅವನೊಂದಿಗೆ ವಾದಿಸಿ, ಜಗಳವಾಡಿ, ಕೊನೆಗೆ ಅವನಿಗೇ ಶರಣಾಗಿ ಭಕ್ತಿಯ ಪರಾಕಾಷ್ಟತೆಯನ್ನು ಎತ್ತಿಹಿಡಿದರು. ಇವರಿಗೆ 'ತೆಲುಗು ಪದಕವಿತಾ ಪಿತಾಮಹ' ಎಂಬ ಗೌರವ ಸಂದಿದೆ. ಇವರು ರಚಿಸಿದ ಸುಮಾರು ೩೨,೦೦೦ ಆಧ್ಯಾತ್ಮ ಹಾಗು ಶೃಂಗಾರ ಸಂಕೀರ್ತನೆಗಳು (ಸಂಸ್ಕೃತ ಹಾಗು ತೆಲುಗು ಭಾಷೆಗಳಲ್ಲಿ) ಕರ್ನಾಟಕ ಸಂಗೀತದ ಆಧುನಿಕ ಕೃತಿರೂಪಕ್ಕೆ ಬುನಾದಿ ಹಾಕಿತು.

೧೨ನೆ ಶತಮಾನದಲ್ಲಿ ಶ್ರೀ ಬಸವಣ್ಣನವರು ಕರ್ನಾಟಕದ ಸಾಮಾಜಿಕ ಮತ್ತು ಧಾರ್ಮಿಕ ಆಂದೋಲನದಲ್ಲಿ ಅತ್ಯಂತ ಪ್ರಮುಖ ಹಾಗು ಕ್ರಾಂತಿಕಾರಿ ಪಾತ್ರ ವಹಿಸಿದರು. ಬಸವಕಲ್ಯಾಣದಲ್ಲಿ 'ಅನುಭವ ಮಂಟಪ' ಎಂಬ ಆಧ್ಯಾತ್ಮ ಸಂಸತ್ತನ್ನು ಸ್ಥಾಪಿಸಿದರು. ಅದರಿಂದ ಪ್ರಾರಂಭಗೊಂಡ ವೀರಶೈವ ಸಂಪ್ರದಾಯದ ಅಭಿವ್ಯಕ್ತಿಯಾದುದೇ ವಚನ ಸಾಹಿತ್ಯದಿಂದ. ಬಸವಣ್ಣನವರು ಜನಸಾಮಾನ್ಯರಿಗೆ ತತ್ತ್ವವಿಚಾರಗಳು ಸುಲಭವಾಗಿ ಅರ್ಥವಾಗಿ ಅವರೂ ಆಧ್ಯಾತ್ಮ ಏಳಿಗೆಯನ್ನು ಸಾಧಿಸಲು ಸರಳ ಕನ್ನಡದಲ್ಲಿ ವಚನಗಳನ್ನು ರಚಿಸಿದರು. 'ದಯವಿಲ್ಲದ ಧರ್ಮವಾವುದಯ್ಯ', 'ದೇವನೊಬ್ಬ ನಾಮ ಹಲವು', 'ಸಕಲ ಜೀವಗಳಿಗೆ ಲೇಸನು ಬಯಸುವುದೇ ನಿಜವಾದ ಧರ್ಮ', ಎಂದು ಸಾರಿ, ಮಾನವೀಯ ಮೌಲ್ಯಗಳಿಗೆ ಒತ್ತುಕೊಟ್ಟರು. ಅಲ್ಲಮ್ಮಪ್ರಭು, ಅಕ್ಕಮಹಾದೇವಿ, ನಾಗಲಾಂಬಿಕೆ, ಮಡಿವಾಳ ಮಾಚಯ್ಯ, ಅಂಬಿಗರ ಚೌಡಯ್ಯ, ಅಂತ್ಯಜ ಹರಳಯ್ಯ ಮೋಡಲಾದ ೨೦೦ ವಚನಕಾರರು ಈ ಸಂಪ್ರದಾಯವನ್ನು ಬೆಳೆಸಿದರು.

ದ್ವೈತ ಸಿದ್ಧಾಂತದ ಪ್ರವರ್ತಕರಾದ ಶ್ರೀಮನ್ಮಧ್ವಾಚಾರ್ಯರು ೧೩ನೆ ಶತಮಾನದಲ್ಲಿ ಜನ್ಮ ತಾಳಿದ ಒಬ್ಬ ಮಹಾನ್ ವಿಭೂತಿ ಪುರುಷರು. 'ಸ್ವತಂತ್ರಂ ಪರತಂತ್ರಂ ಚ ದ್ವಿವಿಧಂ ತತ್ತ್ವಮೀಷ್ಯತೇ । ಸ್ವತಂತ್ರೋ ಭಗವಾನ್ ವಿಷ್ಣುಃ ನಿರ್ದೋಷೋSಶೇಷ ಸದ್ಗುಣಃ ।।' ಎಂಬುದು ಇವರ ತತ್ತ್ವ. ವಿಷ್ಣುಸರ್ವೋತ್ತಮತ್ವ (ಹರಿಃ ಪರತರಃ), ಜಗತ್ತಿನ ಸತ್ಯವಾದ (ಸತ್ಯಂ ಜಗತ್), ಭೇದ ತತ್ತ್ವ (ಜೀವ-ಈಶ್ವರ ಭೇದ, ಜಡ-ಈಶ್ವರ ಭೇದ, ಜಡ-ಜೀವ ಭೇದ, ಪರಸ್ಪರ ಜೀವ ಭೇದ ಹಾಗು ಪರಸ್ಪರ ಜಡ ಭೇದ) - ಇವು ಇವರ ಸಿದ್ಧಾಂತದ ಮುಖ್ಯಾಂಶಗಳು. ಇವರ 'ಋಗ್ವೇದಭಾಷ್ಯ', 'ಬ್ರಹ್ಮಸೂತ್ರಭಾಷ್ಯ', 'ಗೀತಾಭಾಷ್ಯ', 'ಮಹಾಭಾರತತಾತ್ಪರ್ಯನಿರ್ಣಯ', 'ವಿಷ್ಣುತತ್ತ್ವನಿರ್ಣಯ', 'ಯಮಕಭಾರತ', ಮುಂತಾದ ಸುಮಾರು ೪೦ ಶಾಸ್ತ್ರಗ್ರಂಥಗಳನ್ನು 'ಸರ್ವಮೂಲಗ್ರಂಥಗಳು' ಎಂದು ಕರೆಯಲಾಗುತ್ತದೆ. ತತ್ತ್ವಪ್ರತಿಪಾದನೆಗೆ, ವೇದೋಪನಿಷತ್ತುಗಳ ನಿರ್ವಚನ ಹಾಗು ವ್ಯಾಖ್ಯಾನಕ್ಕೆ ಈ ಗ್ರಂಥಗಳನ್ನು ರಚಿಸಿದರೆ, ಭಗವಂತನಲ್ಲಿ ತಮಗಿದ್ದ ನಿರ್ಮಲವಾದ ಭಕ್ತಿಭಾವದ ಆವಿರ್ಭಾವಕ್ಕೆ ದ್ವಾದಶ ಸ್ತೋತ್ರಗಳನ್ನು ರಚಿಸಿದರು. ತಮ್ಮ ಶಿಷ್ಯರೊಂಗಿದೆ ಸಂಚರಿಸುತ್ತ ಭಗವಂತನ ಕುರಿತು ಈ ಸಂಸ್ಕೃತ ಹಾಡುಗಬ್ಬಗಳನ್ನು ರಚಿಸಿ ಹಾಡಿದರು, ಶಿಷ್ಯರಿಂದಲೂ ಹಾಡಿಸಿದರು. ಜೊತೆಗೆ ತಾನೂ ತಾಳ ತಟ್ಟಿ ಕುಣಿದು ನಲಿದಾಡಿದರು. ಇದು ಭಕ್ತಿಯ ಭಾಷೆ; ಇದು ಸಂಗೀತದ ಭಾಷೆ. ಈ ದ್ವಾದಶ ಸ್ತೋತ್ರಗಳು ಸಂಸ್ಕೃತ ಭಕ್ತಿ ಕಾವ್ಯಗಳಲ್ಲೇ ಅತ್ಯಂತ ಅಪೂರ್ವ ಕೃತಿ. ವಾಗ್ಗೇಯಕಾರರಾದ ಆಚಾರ್ಯರು ಭಕ್ತಿಸಾಹಿತ್ಯಕ್ಕೆ ನೀಡಿದ ಕಾಣಿಕೆ ಇದು; ಕರ್ನಾಟಕ ಸಂಗೀತ ಪರಂಪರೆಗೆ ನೀಡಿದ ಕಾಣಿಕೆ ಇದು. ಈ ಬೀಜ ಮೊಳಕೆ ಬಿಟ್ಟಾಗಲೆ ದಾಸಸಾಹಿತ್ಯದ ಉದಯವಾಗಿತು. ಇವರ ಶಿಷ್ಯರಾದ ತ್ರಿವಿಕ್ರಮ ಪಂಡಿತಾಚಾರ್ಯರು, ನಾರಾಯಣ ಪಂಡಿತಾಚಾರ್ಯರು, ಕಮಲಾಕ್ಷ ತೀರ್ಥರು ಮುಂತಾದವರು ಸಂಸ್ಕೃತದಲ್ಲಿ ಅನೇಕ ಸುಂದರ ಗೇಯ ಪದ್ಯಗಳನ್ನು ರಚಿಸಿದರು. 

ಮಧ್ವಾಚಾರ್ಯರು ಭಕ್ತಿ ಪಂಥಕ್ಕೆ, ದಾಸ ಸಾಹಿತ್ಯಕ್ಕೆ ನಾಂದಿ ಹಾಡಿದ ನಂತರ, ಅವರ ನೇರ ಶಿಷ್ಯರಾದ ನರಹರಿ ತೀರ್ಥರು (೧೩ನೆ ಶತಮಾನ) ಭಾಗವತ ಧರ್ಮದ ಕೀರ್ತನ ಪದ್ಧತಿಯಿಂದ ಪ್ರೇರಿತರಾಗಿ ಕನ್ನಡದಲ್ಲಿ ಕೀರ್ತನೆ ರಚಿಸಿದ ಮೊದಲಿಗರು. ಭಕ್ತಿಯಿಂದಲೇ ಮುಕ್ತಿ ಎನ್ನುತ್ತ ಭಗವದ್ವೃತ್ತಿಗೆ ಸಂಗೀತವನ್ನು, ಕಾವ್ಯವನ್ನು ಎತ್ತಿ ಹಿಡಿದರು. ನರಹರಿ ತೀರ್ಥರಿಂದ ಪ್ರಾರಂಭಗೊಂಡ ಈ ಪರಂಪರೆಯನ್ನು ಬೆಳಸಿ ದಾಸಸಾಹಿತ್ಯಕ್ಕೆ ಒಂದು ತಳಹದಿ ಹಾಕಿಕೊಟ್ಟವರು ದಾಸಶ್ರೇಷ್ಠ, ಸಾಹಿತ್ಯಚಿಂತಾಮಣಿಗಳಾದ ಶ್ರೀಪಾದರಾಜರು. 'ಇಕೋ ನೋಡೆ ರಂಗನಾಥನ ಪುಟ್ಟ ಪಾದವ', 'ಪೋಪು ಹೋಗೋಣ ಬಾರೋ ರಂಗ', 'ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ', ಮುಂತಾದ ಅವರ ರಚನೆಗಳು ಭಗವಂತನಲ್ಲಿ ಅವರಿಗಿದ್ದ ಅಚಲ ಭಕ್ತಿ, ವಾತ್ಸಲ್ಯ ಭಾವ, ಆಳವಾದ ತತ್ತ್ವಜ್ಞಾನ ಹಾಗು ಅನುಭವಕ್ಕೆ ಅಪೂರ್ವ ನಿದರ್ಶನ. ಪೂಜೆ ಉತ್ಸವಗಳ ವೈಭವವಿಜೃಂಭಣೆಗಳಲ್ಲಿ ಕನ್ನಡ ಕೀರ್ತನೆಗಳನ್ನು ಹಾಡಿ, ನರ್ತನ ಮಾಡುವ ಭಗವತೋತ್ತಮರ ತಂಡವೊಂದನ್ನೇ ಸಂಘಟಿಸಿ ಹರಿದಾಸ ಸಂಸ್ಕೃತಿಯ ನಿರ್ಮಾಣ ಮಾಡಿದರು. ಇವರ ಶಿಷ್ಯರಾದ ವ್ಯಾಸತೀರ್ಥರು ದಾಸಪರಂಪರೆಯ ಸುಸ್ಥಿತಿಗೆ ಕಾರಣರಾದರು. ಕೀರ್ತನೆಗಳನ್ನು ರಚಿಸಿದ್ದು ಮಾತ್ರವಲ್ಲದೆ, ಹರಿಭಾಕ್ತಿಯ ಪ್ರಚಾರಕ್ಕಾಗಿ ವ್ಯಾಸಕೂಟ-ದಾಸಕೂಟಗಳನ್ನು ಬೆಳಸಿ ದಾಸಸಾಹಿತ್ಯದ ವಿಕಾಸಕ್ಕೆ ನೆರವಾದ ಮಹನೀಯರು ವ್ಯಾಸತೀರ್ಥರು. ಉಡುಪಿಯ ಸೋದೆ ಮಠದ ಯತಿಗಳಾದ ಶ್ರೀ ವಾದಿರಾಜರು ಒಬ್ಬ ಸಂತ, ಕವಿ, ಪಂಡಿತ, ದಾರ್ಶನಿಕ, ತತ್ತ್ವಜ್ಞಾನಿ, ಭಾಗವದನುಭವಿ, ಸಮಾಜ ಸುಧಾರಕ, ಔದಾರ್ಯಮೂರ್ತಿ, ಪವಾಡಪುರುಷರಾಗಿ ಮೆರೆದವರು. 'ತೀರ್ಥಪ್ರಬಂಧ', 'ರುಗ್ಮಿಣೀಶವಿಜಯ', 'ಯುಕ್ತಿಮಲ್ಲಿಕಾ' ಮುಂತಾದವು ಇವರ ಸಂಸ್ಕೃತ ಗ್ರಂಥಗಳಾದರೆ, 'ಲಕ್ಷ್ಮೀಶೋಭಾನೆ', 'ಹರಿಸರ್ವೋತ್ತಮಸಾರ' ಇವರ ಕನ್ನಡ ಕೃತಿಗಳು. ಅಲ್ಲದೆ, ತಮ್ಮ ಉಪಾಸ್ಯಮೂರ್ತಿಯಾದ 'ಹಯವದನ' ಎಂಬ ಅಂಕಿತದಿಂದ ಅನೇಕ ಕನ್ನಡ ಹಾಗು ತುಳು ಹಾಡುಗಳನ್ನು ರಚಿಸಿ ಭಕ್ತಿಸಾಹಿತ್ಯವನ್ನು ಬೆಳೆಸಿದರು. 

ಕರ್ನಾಟಕ ಸಂಗೀತದ ವಿಕಾಸದಲ್ಲಿ ಈ ದಾಸ ಸಾಹಿತ್ಯದ ಕೊಡುಗೆ ಅತ್ಯಂತ ಪ್ರಮುಖವಾದುದು. 'ದಾಸರೆಂದರೆ ಪುರಂದರದಾಸರಯ್ಯ' ಎಂಬ ಕೀರ್ತಿಗೆ ಪಾತ್ರರಾದ ಪುರಂದರ ದಾಸರು (೧೬ನೆ ಶತಮಾನ) ಲಕ್ಷಗಟ್ಟಲೆ ದೇವರನಾಮ, ಸುಳಾದಿ, ಉಗಾಭೋಗಗಳನ್ನು ರಚಿಸಿ ದಾಸಸಾಹಿತ್ಯವನ್ನು ಬೆಳಸಿದ್ದಲ್ಲದೆ, ಸಂಗೀತಾಭ್ಯಾಸಕ್ರಮವನ್ನು ಪರಿಷ್ಕೃತಗೊಳಿಸಿ, ಸುವ್ಯವಸ್ಥಿತವಾದ ಸರಳೆ, ಅಲಂಕಾರ, ಗೀತೆಗಳನ್ನು ರಚಿಸಿದರು. 'ಕರ್ನಾಟಕ ಸಂಗೀತ ಪಿತಾಮಹ'ರೆನಿಸಿದ ಇವರು ಸ್ಥಾಪಿಸಿದ ಅಭ್ಯಾಸಕ್ರಮ ಎಷ್ಟು ಶತಮಾನಗಳಾದರೂ ಹಾಗೆಯೇ ಉಳಿದುಕೊಂಡು ಬಂದಿದೆ. ಪುರಂದರ ದಾಸರ ರಚನೆಗಳಲ್ಲಿ ಕಂಡುಬರುವ ಆಧ್ಯಾತ್ಮಿಕ, ಸಾಮಾಜಿಕ, ಜೀವನ ಮೌಲ್ಯಗಳು ಉಪಮಾತೀತವಾಗಿವೆ. ಭಕ್ತಿ, ಹರಿಸರ್ವೊತ್ತಮತ್ವ, ಮಾಧ್ವತತ್ತ್ವಜ್ಞಾನ, ಮಧ್ವಾಚಾರ್ಯರ ಹಿರಿಮೆ, ಪೌರಾಣಿಕ ಚಿತ್ರಗಳು, ಸಾಮಾಜಿಕ ಆಶಯಗಳ ನಿರೂಪಣೆ- ಇವೆಲ್ಲವೂ ದೊರೆಯುತ್ತದೆ. ನಾಮಸಂಕೀರ್ತನೆಯ ಮಹತ್ವ (ಹರಿನಾರಾಯಣ ಎನು ಮನೆವೆ), ಸದಾಚಾರ (ಆಚಾರವಿಲ್ಲದ ನಾಲಿಗೆ), ಫಲಾಪೇಕ್ಷೆಯಿಲ್ಲದ ನಿಷ್ಕಾಮಕರ್ಮಯೋಗದ ಹಿರಿಮೆ (ಹರಿ ನಿನ್ನೋಲುಮೆಯು), ದೈನ್ಯಭಾವ (ಕಂಡು ಕಂಡು ನೀ ಎನ್ನ), ವಾತ್ಸಲ್ಯಭಾವ (ಜಗದುದ್ಧಾರನ), ಗಹನವಾದ ತತ್ತ್ವಶಾಸ್ತ್ರದರ್ಶನ (ಒಳಗಣ್ಣಿನಿಂದಲಿ ನೋಡು), ಪರಮಾತ್ಮನಲ್ಲಿ ಸಂಪೂರ್ಣ ಶರಣಾಗತಿ (ಇನ್ನು ದಯ ಬಾರದೆ) - ಹೀಗೆ ಪುರಂದರ ದಾಸರ ರಚನೆಗಳಲ್ಲಿ ನಮಗೆ ಕಾಣಸಿಗದ ವಿಷಯವಿಲ್ಲ. ಅದರಿಂದಲೆ, ಅವರ ರಚನೆಗಳನ್ನು 'ಪುರಂದರೋಪನಿಷದ್' ಎಂದು ಕರೆದು ಅವುಗಳಿಗೆ ಉಪನಿಷತ್ತುಗಳ ಸ್ಥಾನವನ್ನು ಕೊಡಲಾಗಿದೆ. ತಮ್ಮ ಸುಮಾರು ೮೦ ವರ್ಷಗಳ ಜೀವನವನ್ನು ಹರಿದಾಸರಾಗಿ ರಾಗತಾಳಬದ್ಧವಾದ ಕೀರ್ತನೆಗಳನ್ನು ಹಾಡುತ್ತ, ಭಕ್ತಿಯನ್ನು ಹರಡುತ್ತ, ಸಂಗೀತದ ಪ್ರಚಾರದಲ್ಲಿಯೂ ಕೆಲಸಮಾಡುತ್ತ ಕಳೆದರು. ಕರ್ನಾಟಕ ಸಂಗೀತದ ಶ್ರೇಷ್ಠ ವಾಗ್ಗೇಯಕಾರರಲ್ಲಿ ಮೊದಲಿಗರಾಗಿದ್ದ ಸದ್ಗುರು ತ್ಯಾಗರಾಜರು ಪುರಂದರದ ಕೃತಿಗಳನ್ನು ಅಭ್ಯಾಸಮಾಡಿದ್ದರೆಂದೂ, ಅವರಿಂದ ಪ್ರೇರಣೆಯನ್ನು ಪಡೆದಿದ್ದರೆಂದೂ ತಿಳಿದುಬರುತ್ತದೆ. ಕನಕದಾಸರು, ಮಹಿಪತಿದಾಸರು, ಗೋಪಾಲದಾಸರು, ವಿಜಯದಾಸರು, ಜಗನ್ನಾಥದಾಸರು, ಪ್ರಸನ್ನವೇಂಕಟದಾಸರು - ಹೀಗೆ ಹರಿದಾಸ ಸಾಹಿತ್ಯ ಹಾಗು ಕರ್ನಾಟಕ ಸಂಗೀತ ಒಂದಕ್ಕೊಂದು ಪೂರಕವಾಗಿ ಬೆಳೆಯಿತು. 'ಕಲಿಯುಗದಲ್ಲಿ ದೇವನು ಕೀರ್ತನೆಗೆ ಒಲಿಯುವನು' ಎಂಬ ಕಾರಣದಿಂದಾಗಿ ಈ ದಾಸಕೂಟದಿಂದ ವಿಶಿಷ್ಟವೂ ವಿಪುಲವೂ ಆದ ಸಾಹಿತ್ಯ ಸಿದ್ಧವಾಯಿತು. ಶಾಸ್ತ್ರತಿಳಿವಳಿಕೆಯಲ್ಲಿ ಅಸಾಮಾನ್ಯರಾಗಿದ್ದು ಸಂಸ್ಕೃತ ಗ್ರಂಥಗಳನ್ನು ರಚಿಸಿದ್ದಲ್ಲದೆ, ಜನರಿಗೆ ತಿಳಿಹೇಳುವ ಉದ್ದೇಶದಿಂದ ಕನ್ನಡದಲ್ಲಿ ಗೇಯಪ್ರಧಾನವಾದ ಭಕ್ತಿರಸಭಾರಿತವಾದ ದೇವರನಾಮಗಳನ್ನು ರಚಿಸಿದ್ದು ಅಚ್ಚರಿಯೇ ಸರಿ. ವಚನಸಾಹಿತ್ಯ ಶಿವೋಪಾಸನೆಯನ್ನು ಪ್ರತಿಪಾದಿಸಿದರೆ, ದಾಸಸಾಹಿತ್ಯವು ಹರಿಸರ್ವೊತ್ತಮತ್ವವನ್ನು ಪ್ರತಿಪಾದಿಸಿ ಹರಿಭಕ್ತಿಯನ್ನು ಕೇಂದ್ರವಾಗಿರಿಸಿಕೊಂಡಿದೆ. ಎರಡೂ ಸಾಹಿತ್ಯಪ್ರಕಾರಗಳು ಭಕ್ತಿ, ಆಧ್ಯಾತ್ಮಿಕ ಮೌಲ್ಯಗಳು, ದೇವರಿಗೆ ಸರ್ವಾರ್ಪಣದ ಮನೋಭಾವ, ಉತ್ತಮ ಸಾಮಾಜಿಕ ಜೀವನ, ಸತ್ಯ, ಶೌಚಾಚಾರ, ಸರಳತೆ ಇತ್ಯಾದಿಗಳನ್ನು ತಮ್ಮದೇ ಆದಂತಹ ವಿಶಿಷ್ಟ ರೀತಿಗಳಲ್ಲಿ ಸಾರುತ್ತವೆ. 

೧೬ನೆ ಶತಮಾನ ದೇಶದಲ್ಲೆಲ್ಲ ಭಕ್ತಿ ಪಂಥ ಪ್ರಚಾರದಲ್ಲಿದ್ದ ಕಾಲ. ದಕ್ಷಿಣದಲ್ಲಿ ಹರಿದಾಸರು ಕನ್ನಡದಲ್ಲಿ ಪರಮಾತ್ಮನನ್ನು ಹಾಡಿ ಕೊಂಡಾಡಿದರೆ, ಉತ್ತರದಲ್ಲಿ ಕಬೀರ್, ಸೂರದಾಸ್, ಮೀರಾಬಾಯಿ, ತುಳಸಿದಾಸ್ ಮುಂತಾದ ಪರಮೋತ್ಕೃಷ್ಟ  ಭಗವದ್ಭಕ್ತರು ಹಿಂದಿಯಲ್ಲಿ ಅಪಾರವಾದ 'ಭಜನ್'ಗಳನ್ನು ರಚಿಸಿ ಧನ್ಯರಾದರು. ದಾಸನಾಗಿ, ಸಖನಾಗಿ, ತಾಯಿಯಾಗಿ, ಪ್ರಣಯಿನಿಯಾಗಿ ಭಗವಂತನನ್ನು ಅನುಭವಿಸಿದ ಈ ಭಕ್ತಾಗ್ರೇಸರರು ತಮ್ಮ ಅನುಭವವನ್ನು ನಮಗೆ ತಮ್ಮ ಭಜನ್ ಗಳ ಮೂಲಕ ನೀಡಿದರು. ಅಂತೆಯೆ, ಮಹಾರಾಷ್ಟ್ರದಲ್ಲಿ ಸಂಕೀರ್ತನೆಗಳಿಂದ ಭಕ್ತಿಯನ್ನು ಹರಡಿದವರು ತುಕಾರಾಂ, ನಾಮದೇವ್, ಜ್ಞಾನೇಶ್ವರ್, ರಾಮದಾಸ್, ಮುಕ್ತಾಬಾಯಿ, ಸಕ್ಕೂಬಾಯಿ, ಭಾನುದಾಸ್ ಮುಂತಾದವರು. ಪರಮಾತ್ಮನಲ್ಲಿ 'ಪ್ರೇಮಭಕ್ತಿ'ಯನ್ನು ಹೊಂದಿ "ವಿಠಲ ವಿಠಲ ಪಾಂಡುರಂಗ" ಎಂದು ಹಾಡುತ್ತ ಮರಾಠಿಯಲ್ಲಿ 'ಅಭಂಗ್' ಗಳನ್ನು ರಚಿಸಿದರು. ಅಭಂಗ್ ಎಂದರೆ ಭಂಗವಿಲ್ಲದ್ದು, ಅಂದರೆ ನಿರಂತರವಾಗಿ ನಡೆಯುವಂಥದ್ದು - ಅದೇ ಭಗವನ್ನಾಮ ಸಂಕೀರ್ತನೆ. 

ಬಂಗಾಳದಲ್ಲಿ ೧೬ನೆ ಶತಮಾನದಲ್ಲಿ ಚೈತನ್ಯ ಮಹಾಪ್ರಭುಗಳು ಮಾಧ್ವಸಿದ್ಧಾಂತದಿಂದ ಪ್ರಭಾವಿತರಾಗಿ  ಕೃಷ್ಣಭಕ್ತಿಯ ಪರಾಕಾಷ್ಟೆಯನ್ನು ಸಾರಿದರು. ಸದಾ ಕೃಷ್ಣನಾಮವನ್ನು ಜಪಿಸಿ, ಕೃಷ್ಣನನ್ನು ಕುರಿತ ಕೀರ್ತನೆಗಳನ್ನು ತನ್ಮಯವಾಗಿ ಹಾಡುತ್ತ, ಕುಣಿಯುತ್ತ, ತಮ್ಮ ಮನೆಯನ್ನು ಸಾಮೂಹಿಕ ಕೀರ್ತನೆ, ಭಜನೆಗಳ ಕೇಂದ್ರವನ್ನಾಗಿ ಮಾಡಿಕೊಂಡಿದ್ದರು. 

ಶುದ್ಧಾದ್ವೈತದ ಪ್ರವರ್ತಕರಾದ ವಲ್ಲಭಾಚಾರ್ಯ, 'ನಾರಾಯಣೀಯಮ್' ರಚಿಸಿದ ನಾರಾಯಣ ಭಟ್ತಾತ್ರಿ, 'ಗೀತಗೋವಿಂದ' ಮಹಾಕಾವ್ಯದ ಜಯದೇವಕವಿ - ಹೀಗೆ ಆಧ್ಯಾತ್ಮಚಿಂತಕರು ಹಾಗು ಅವರ   ಗಾಯನಯೋಗ್ಯ ರಚನೆಗಳು ಲೆಕ್ಕವಿಲ್ಲದಷ್ಟು. ಇಷ್ಟು ಜನ ಮಹಾನುಭಾವರ ಆರಾಧ್ಯದೈವ ಬೇರೆ ಬೇರೆ, ಅವರು ಹಿಡಿದುಕೊಂಡ ಮಾರ್ಗಗಳು ಬೇರೆ ಬೇರೆ, ಆದ ಅನುಭವಗಳು ಬೇರೆ ಬೇರೆ, ರಚಿಸಿದ ಕೃತಿಗಳು ಬೇರೆ ಬೇರೆ, ಬಳಸಿದ ಭಾಷೆಗಳು ಬೇರೆ ಬೇರೆ. ಆದರೆ ಎಲ್ಲರ ರಚನೆಗಳು ಹೃದಯದಿಂದ ಚಿಮ್ಮಿ ಬಂದವುಗಳೇ ಹೊರತು, ಶುಷ್ಕ ಬುದ್ಧಿಯ, ನೀರಸ ಪಾಂಡಿತ್ಯದ ಫಲಗಳಲ್ಲ. ಎಲ್ಲರ ರಚನೆಗಳೂ ಅಲೌಕಿಕಾನಂದದ, ಆ ಚರಮ ಸತ್ಯದ (Ultimate truth) ಅನುಭವದ ಕನ್ನಡಿಗಳು. 

"ಆಕಾಶಾತ್ ಪತಿತಂ ತೋಯಂ ಯಥಾ ಗಚ್ಛತಿ ಸಾಗರಂ । ಸರ್ವದೇವ ನಮಸ್ಕಾರಃ ಕೇಶವಂ ಪ್ರತಿ ಗಚ್ಛತಿ ।।" ಎಂಬುದಾಗಿ ನಮ್ಮ ಶಾಸ್ತ್ರಗಳು ಸಾರಿಲ್ಲವೇ ?